ಪುಟಗಳು

ಶನಿವಾರ, ಜುಲೈ 23, 2011

ಕ್ರಿಸ್ಪಿ ಟೊಮೆಟೊ ದೋಸೆ


ಅಕ್ಕಿ (ಸಾದಾ) 2 ಕಪ್
ಟೊಮೆಟೊ 3
ಬ್ಯಾಡಗಿ ಮೆಣಸು 6
ಹುಳಿ ನೆಲ್ಲಿಕಾಯಿ ಗಾತ್ರ
ಇಂಗು 2 ಚಿಟಿಕೆ
ತೆಂಗಿನತುರಿ ಸ್ವಲ್ಪ
ಕರಿಬೇವು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು

ಅಕ್ಕಿಯನ್ನು ತೊಳೆದು ನೀರಿನಲ್ಲಿ 1 ಗಂಟೆ ನೆನೆಸಿಡಿ. ನಂತರ ಅಕ್ಕಿ ಜೊತೆ ಕಟ್ ಮಾಡಿದ ಟೊಮೆಟೊ, ಬ್ಯಾಡಗಿ, ಹುಳಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ.
ಹಿಟ್ಟಿಗೆ ಉಪ್ಪು, ಸಣ್ಣಗೆ ಹೆಚ್ಚಿದ ಕರಿಬೇವು, ತೆಂಗಿನತುರಿ, ಇಂಗು ಮತ್ತು ನೀರು ಹಾಕಿ ಚೆನ್ನಾಗಿ ಕಲೆಸಿ (ಇದು ನೀರು ದೋಸೆಯ ಹಿಟ್ಟಿನಷ್ಟು ತೆಳುವಾಗಿರ ಬೇಕು). ನೀರು ದೋಸೆ/ ರವೆ ದೋಸೆಯಂತೆ ಹಿಟ್ಟನ್ನು ಕಾವಲಿ ಮೇಲೆ ಸುರಿಯಿರಿ. ದೋಸೆ ಕ್ರಿಸ್ಪ್ ಆಗಿರಲಿ. ಕಲರ್ ಫ಼ುಲ್ ದೋಸೆ ಶುಂಠಿ ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ಗ್ರೀನ್ ಬಾತ್

ಅನ್ನ  2 ಕಪ್ (ಉದುರುದುರಾಗಿರಬೇಕು)
ಸೊಪ್ಪಿನ ಪೇಸ್ಟ್ 1 ಕಪ್ (ಪುದಿನ, ಕೊತ್ತಂಬರಿ ಸೊಪ್ಪು, ಪಾಲಕ್, ದಂಟು)
ಇಂಗು 1/4
ಸಾಸಿವೆ 1/4 ಚಮಚ
ಉದ್ದು 1 ಚಮಚ
ಕಡಲೆಬೇಳೆ 2 ಚಮಚ (1 ಗಂಟೆ ಮೊದಲು ನೆನೆಸಿದ್ದು)
ಹಸಿಮೆಣಸು 4
ಒಣ ಮೆಣಸು 3 (ಬ್ಯಾಡಗಿ)
ಗೋಡಂಬಿ 6
ಎಳ್ಳಿನ ಪುಡಿ 1 ಚಮಚ (ಹುರಿದು ಪುಡಿ ಮಾಡಿದ್ದು)
ಅರಸಿನ 2 ಚಿಟಿಕೆ
ನಿಂಬೆರಸ 2 ಚಮಚ
ಎಣ್ಣ್ಗೆ 6 ಚಮಚ
ತುಪ್ಪ ಅಥವಾ ಬೆಣ್ಣೆ 1 ಚಮಚ

ಮೊದಲಿಗೆ ಅನ್ನ ಉದುರುದುರಾಗಿ ಮಾಡಿ ಇಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ,  ತುಪ್ಪ ಹಾಕಿ, ಕಾದ ನಂತರ ಇದಕ್ಕೆ ಇಂಗು, ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕಡಲೆಬೇಳೆ,  ಉದ್ದು, ಹಸಿಮೆಣಸು, ಒಣಮೆಣಸು, ಗೋಡಂಬಿ ಎಲ್ಲವೂ ಹಾಕಿ ಹುರಿಯಿರಿ. ನಂತರ ಚೆನ್ನಾಗಿ ತೊಳೆದು ಪೇಸ್ಟ್ ಮಾಡಿದ ಸೊಪ್ಪು ಮತ್ತು ಉಪ್ಪು ಹಾಕಿ, ಹಸಿ ವಾಸನೆ ಹೋಗುವವರೆಗೂ ಕಲೆಸಿ.  ಎಣ್ಣೆ ಮೇಲೆ ಬಂದಾಗ ಅನ್ನವನ್ನು ಹಾಕಿ ಕಲೆಸಿ, ಉರಿ ಕಡಿಮೆ ಮಾಡಿ ಇದಕ್ಕೆ ಎಳ್ಳಿನ ಪುಡಿ, ಅರಸಿನ ಹಾಕಿ ಕಲೆಸಿ ಬೆಂಕಿ ನಂದಿಸಿ, ಕೊನೆಗೆ ನಿಂಬೆರಸ ಹಾಕಿ ಕಲೆಸಿ ಬಿಸಿ ಬಿಸಿಯಾಗಿ ಬಡಿಸಿ. (ಎಲ್ಲಾ ಸೊಪ್ಪು ಸಮನಾಗಿ ತೆಗೆದುಕೊಳ್ಳಿ, ಈ ತರಹದ ಅನ್ನ ಸ್ವಲ್ಪ ಖಾರವಾಗಿ ಇದ್ದರೆ ರುಚಿ).

ಶುಕ್ರವಾರ, ಜುಲೈ 01, 2011


ಆಲೂ, ಬಸಳೆ ಕೂಟು

ಆಲೂಗಡ್ಡೆ 3
ಬಸಳೆ 1 ಕಟ್ಟು
ಈರುಳ್ಳಿ ದೊಡ್ಡದು 1
ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಹಸಿಮೆಣಸು ಉದ್ದಕ್ಕೆ ಹೆಚ್ಚಿದ್ದು 2
ಟೊಮೆಟೊ 1
ಮೆಣಸಿನ ಹುಡಿ 1 ಚಮಚ
ಅರಸಿನ 1/4 ಚಮಚ
ದನಿಯ ಹುಡಿ 1/2 ಚಮಚ
ತೆಂಗಿನಕಾಯಿ ರುಬ್ಬಿದ್ದು 1/2 ಕಪ್ (ಸ್ವಲ್ಪ ನೀರು ಹಾಕಿ ರುಬ್ಬಿ)
ಮೊಸರು 2 ಚಮಚ
ಗರಂ ಮಸಾಲ 1/4 ಚಮಚ
ಕೊತ್ತಂಬರಿ ಸೊಪ್ಪು 2 ಚಮಚ
ಎಣ್ಣೆ 4 ಚಮಚ

ಮೊದಲಿಗೆ ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಉದ್ದಕ್ಕೆ ಕಟ್ ಮಾಡಿಟ್ಟುಕೊಳ್ಳಿ, ನಂತರ ಸೊಪ್ಪು 2, 3 ಸಲ ಶುದ್ಧ ಮಾಡಿ ಕಟ್ ಮಾಡಿಟ್ಟುಕೊಳ್ಳಿ
ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಈರುಳ್ಳಿ ಉದ್ದಕ್ಕೆ ಹೆಚ್ಚಿದ್ದು ಹಾಕಿ, ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ,  ಹಸಿ ವಾಸನೆ ಹೋಗುವವರೆಗೆ ಕಲೆಸಿ. ಮತ್ತೆ ಇದಕ್ಕೆ ಹಸಿಮೆಣಸು, ಟೊಮೆಟೊ ಕಟ್ ಮಾಡಿದ್ದು ಹಾಕಿ, ಉಪ್ಪು ಹಾಕಿ ಕಲೆಸಿ 2 ನಿಮಿಷ ಮುಚ್ಚಿಡಿ.  ನಂತರ ಹೆಚ್ಚಿದ ಬಸಳೆ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ, ಈಗ ಅರಸಿನ, ಮೆಣಸಿನ ಹುಡಿ, ದನಿಯ ಹುಡಿ ಹಾಕಿ 2 ನಿಮಿಷ ಕಲೆಸಿಡಿ. ಮತ್ತೆ ತೆಂಗಿನಕಾಯಿ ರುಬ್ಬಿದ್ದು, ಆಲೂಗಡ್ಡೆ ಕಟ್ ಮಾಡಿದ್ದು ಹಾಕಿ, ಒಮ್ಮೆ ಚೆನ್ನಾಗಿ ಕಲೆಸಿ 1 ಕಪ್ ನೀರು ಹಾಕಿ 2, 3 ನಿಮಿಷ ಕುದಿಯಲು ಬಿಡಿ. ಈಗ ಮೊಸರು (ಕಪ್ ನಲ್ಲಿ ಹಾಕಿ ಚಮಚದಿಂದ ಮಿ಼ಕ್ಸ್ ಮಾಡಿಟ್ಟದ್ದು) ಕೂಟಿಗೆ ಹಾಕಿ, ಮತ್ತೆ ಗರಂ ಮಸಾಲ, ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ ಇಳಿಸಿ.
(ಇದು ತುಂಬಾ ನೀರಾಗಬಾರದು) ಚಪಾತಿ, ಅನ್ನದ ಜೊತೆ ತಿನ್ನಲು ಒಳ್ಳೆಯದಾಗುತ್ತದೆ, ಬಸಳೆ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಹುಣಿಸೆ ಗೊಜ್ಜು

ಸಣ್ಣ (ಸಾಂಬಾರ್) ಈರುಳ್ಳಿ 10
ಎಣ್ಣೆ 2 ಚಮಚ
ಮೆಂತ್ಯೆ 1/2 ಚಮಚ
ಕರಿಬೇವು
ಟೊಮೆಟೊ 1
ಜೀರಿಗೆ ಹುಡಿ 1/2 ಚಮಚ
ಕಾಳು ಮೆಣಸಿನ ಹುಡಿ 1/2 ಚಮಚ
ಮೆಣಸಿನ ಹುಡಿ 1/2 ಚಮಚ
ದನಿಯ ಹುಡಿ 1 ಚಮಚ
ಅರಸಿನ 1/4 ಚಮಚ
ಹುಣಸೆ ಹಣ್ಣು (ಸಣ್ಣ ನಿಂಬೆಹಣ್ಣಿನ ಗಾತ್ರ)

ಈರುಳ್ಳಿ ಸಿಪ್ಪೆ ತೆಗೆದಿಟ್ಟುಕೊಳ್ಳಿ (ಕಟ್ ಮಾಡದೆ ಹಾಗೆಯೇ ಉಪಯೋಗಿಸಬೇಕು). ಹುಳಿಯನ್ನು 1 ಕಪ್ ಬಿಸಿನೀರಿನಲ್ಲಿ ಅರ್ಧ ಘಂಟೆ ಹಾಕಿಟ್ಟು ನಂತರ ರಸ ತೆಗೆದಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಮೆಂತ್ಯೆ, ಕರಿಬೇವು, ಈರುಳ್ಳಿ ಹಾಕಿ ಬೆರಸಿ, ಈರುಳ್ಳಿ ಕಂದು ಬಣ್ಣ ಬರುವಾಗ ಕಟ್ ಮಾಡಿದ  ಟೊಮೆಟೊ, ಉಪ್ಪು ಹಾಕಿ ಕಲೆಸಿ, ಮತ್ತೆ ಜೀರಿಗೆ ಹುಡಿ, ಕಾಳು ಮೆಣಸು, ಮೆಣಸಿನ ಹುಡಿ, ದನಿಯ ಹುಡಿ, ಅರಸಿನ ಹಾಕಿದ ನಂತರ ಹುಳಿ ನೀರು ಹಾಕಿ, ಚೆನ್ನಾಗಿ ಕುದಿಸಿ ಇಳಿಸಿ (ಕಡಿಮೆ ಉರಿಯಲ್ಲಿ ಮಾಡಿದರೆ ಒಳ್ಳೆಯದು). ತುಂಬಾ ಗಟ್ಟಿ ಅನಿಸಿದರೆ ಸ್ವಲ್ಪ ನೀರು ಹಾಕಿ (ಇದು ತುಂಬಾ ನೀರಾಗಬಾರದು). ಬಿಸಿ ಬಿಸಿ ಅನ್ನಕ್ಕೆ ತುಪ್ಪದ ಜೊತೆ....ಆಹಾ..