ಪುಟಗಳು

ಶನಿವಾರ, ಜನವರಿ 22, 2011

ಗಾರ್ಗಿ, ರಿಬ್ಬನ್ ಪಕೋಡ


ಗಾರ್ಗಿ

ಬೆಲ್ಲ 1 ಕಪ್
ನೀರು 1-1/4 ಕಪ್
ಗೋದಿ ಹುಡಿ 1 ಕಪ್
ಕರಿಯಲು ತುಪ್ಪ/ಎಣ್ಣೆ
ಏಲಕ್ಕಿ ಪುಡಿ
ಅಡುಗೆ ಸೋಡ 2 ಚಿಟಿಕೆ
ಗಸಗಸೆ 1 ಚಮಚ
ಗೋಡಂಬಿ 6 
ತೆಂಗಿನತುರಿ 4 ಚಮಚ
 
ಮೊದಲಿಗೆ ನೀರು ಬಿಸಿಗೆ ಇಟ್ಟು ಅದರಲ್ಲಿ ಬೆಲ್ಲ ಹಾಕಿ ಕರಗಿಸಿ, ನಂತರ ಸೋಸಿ. ಬಿಸಿ ಇರುವಾಗಲೇ ಗೋದಿ ಹುಡಿ ಹಾಕಿ ಕಲಸಿ. ಇದನ್ನು ಬೋಂಡ ಹಿಟ್ಟಿನ ಹದಕ್ಕೆ ಕಲಸಿ, 2 ಗಂಟೆ ನೆನೆಯಲು ಬಿಡಿ.  ನಂತರ ಇದರಲ್ಲಿ ಗಸಗಸೆ, ಸೋಡ, ಏಲಕ್ಕಿ, ತುಂಡರಿಸಿದ ಗೋಡಂಬಿ, ತೆಂಗಿನ ತುರಿ ಹಾಕಿ ಕಲಸಿ, ಮತ್ತೆ ಬೋಂಡ ತರಹ ಎಣ್ಣೆಯಲ್ಲಿ ಕರಿಯಿರಿ. ಗಾರ್ಗಿ ಕಂದು ಬಣ್ಣಕ್ಕೆ ತಿರುಗಿದಾಗ ಎಣ್ಣೆಯಿಂದ ತೆಗೆಯಿರಿ. ತಣಿದ ನಂತರ ತಿನ್ನಲು ಬಲು ರುಚಿ. ಸುಲಭವಾಗಿ ಮಾಡಬಹುದಾದ ಸಿಹಿ ತಿಂಡಿ.
(ಗಾರ್ಗಿ ತುಪ್ಪದಲ್ಲೇ ಮಾಡಬಹುದು ಅಥವಾ ಎಣ್ಣೆಯಲ್ಲಿ 2 ಚಮಚ ತುಪ್ಪ ಹಾಕಿ ಕರಿಯಿರಿ. ಸ್ವಲ್ಪ ನೀರು ಹೆಚ್ಚು ಅನಿಸಿದರೆ ಇನ್ನೂ ಸ್ವಲ್ಪ ಗೋದಿ ಹುಡಿ ಹಾಕಿ ಕಲಸಿ)

ರಿಬ್ಬನ್ ಪಕೋಡ

ಅಕ್ಕಿ ಹುಡಿ 1 ಕಪ್
ಕಡಲೆಹಿಟ್ಟು 1 ಕಪ್
ಬೆಣ್ಣೆ 2 ಚಮಚ
ಮೆಣಸಿನ ಹುಡಿ 2 ಚಮಚ
ಕರಿಯಲು ಎಣ್ಣೆ
ಬಿಸಿ ಎಣ್ಣೆ 1/4  ಸೌಟು
ಇಂಗು 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಒಂದು ಪಾತ್ರೆಯಲ್ಲಿ ಎಣ್ಣೆ ಹೊರತು ಎಲ್ಲವನ್ನು ಹಾಕಿ ಕಲಸಿಕೊಳ್ಳಿಮತ್ತೆ 1/4 ಸೌಟು ಎಣ್ಣೆ ಬಿಸಿ ಮಾಡಿ ಹಾಕಿ ಚೆನ್ನಾಗಿ ಕಲಸಿ. ನೀರು ಸ್ವಲ್ಪ ಸ್ವಲ್ಪ ಹಾಕಿ, ಚಕ್ಕುಲಿಯ ಅಚ್ಚಿನಲ್ಲಿ ಹಾಕಿ ಸುಲಭವಾಗಿ ಒತ್ತಲಿಕ್ಕೆ ಬರುವ ಹಾಗೆ  ಕಲಸಿ. ಈ ಮಿಶ್ರಣ ತುಂಬಾ ಗಟ್ಟಿ ಇರಬಾರದು, ತುಂಬಾ ನೀರೂ ಇರಬಾರದು,
ಈಗ ಎಣ್ಣೆಯನ್ನು ಬಾಣಲೆಯಲ್ಲಿ ಕಾಯಲು ಇಟ್ಟು, ಕಾದ ಎಣ್ಣೆಗೆ ಚಕ್ಕುಲಿ ಅಚ್ಚಿನಿಂದ ಡೈರೆಕ್ಟ್ ಆಗಿ ಹಿಟ್ಟು ಒತ್ತಿ. ಚೆನ್ನಾಗಿ ಕರಿದ ನಂತರ ಎಣ್ಣೆಯಿಂದ ತೆಗೆಯಿರಿ.
ಹಿಟ್ಟು ಕಲೆಸಿದ ಕೂಡಲೇ ಮಾಡಬೇಕು. (ಚಕ್ಕುಲಿ ಅಚ್ಚಿನಲ್ಲಿ 5 ಬಿಲ್ಲೆಗಳಿರುತ್ತದೆ, 2 ಉದ್ದ ಲೈನ್ ಇರುವ ಬಿಲ್ಲೆಯನ್ನು ಉಪಯೋಗಿಸಿ)
ರಿಬ್ಬನ್ ಪಕೋಡ ಒಂದು ವಾರಕ್ಕೆ ಇಟ್ಟು ತಿನ್ನಬಹುದು. ಇದು ಒಳ್ಳೆ ಟೈಂ ಪಾಸ್ ಐಟಂ.

ಬುಧವಾರ, ಜನವರಿ 19, 2011

ರೊಟ್ಟಿಗಳು - ಎರಡು ವಿಧ

ಕ್ಯಾಪ್ಸಿಕಂ ರೊಟ್ಟಿ

ಅಕ್ಕಿ ಹುಡಿ 1 ಕಪ್
ಕ್ಯಾಪ್ಸಿಕಂ 1
ಹಸಿಮೆಣಸು 2 (ಸಣ್ಣಗೆ ಹೆಚ್ಚಿಕೊಳ್ಳಿ)
ಕರಿಬೇವು ಸ್ವಲ್ಪ
ತೆಂಗಿನತುರಿ 1/4 ಕಪ್
ಮೈದ 4 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮೊದಲಿಗೆ ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಹಾಕಿ, ನಂತರ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿಕೊಳ್ಳಿ, ಮತ್ತೆ ಬೆಚ್ಚಗಿನ ನೀರು ಹಾಕಿ ಚೆನ್ನಾಗಿ ಕಲೆಸಿತುಂಬಾ ಗಟ್ಟಿ ಇರಬಾರದು, ಕೈಯಲ್ಲಿ ಸುಲಭವಾಗಿ ತಟ್ಟುವಂತಿರಬೇಕು. ನಾನ್ ಸ್ಟಿಕ್  ತವದಲ್ಲಿ ಒಂದು ಚಮಚ ಎಣ್ಣೆ ಸವರಿ, ದೊಡ್ಡ ನಿಂಬೆಹಣ್ಣಿನ ಗಾತ್ರದ  ಉಂಡೆ ತೆಗೆದು ಎಷ್ಟು ಬೇಕೋ ಅಷ್ಟು ತೆಳ್ಳಗೆ ತಟ್ಟಿ ಮತ್ತೆ ಸ್ಟೌವ್ ಹಚ್ಚಿ, ತವ ಅದರ ಮೇಲೆ ಇಟ್ಟು, ರೊಟ್ಟಿಯ ಮೇಲೆ ಒಂದು ಮುಚ್ಚಳ ಮುಚ್ಚಿ, ಮೀಡಿಯಂ ಬೆಂಕಿಯಲ್ಲಿ ಬೇಯಿಸಿ. ಬೇಯುವಾಗ 1 ಚಮಚ ಬೆಣ್ಣೆ ಸವರಿ ತಿರುವಿ ಹಾಕಿ, ಹಾಗೆ ಎರಡು ಕಡೆ ಬೇಯಿಸಿ. ಶುಂಠಿ ಚಟ್ನಿ ಜೊತೆ ತಿನ್ನಲು ರುಚಿ. (ರೊಟ್ಟಿ ಯಾವಾಗಲೂ ತವ ತಣ್ಣಗೆ ಮಾಡಿ ತಟ್ಟಬೇಕು, ಸಾಮಾನ್ಯವಾಗಿ ರೊಟ್ಟಿ ಮಾಡುವಾಗ  2 ತವ ಉಪಯೋಗಿಸಿ ಮಾಡಿದರೆ ಒಳ್ಳೆಯದು)

 ಕಾಯಿ - ಶುಂಠಿ ಚಟ್ನಿ

ಕಾಯಿ ತುರಿ 1 ಕಪ್
ಹಸಿಮೆಣಸು 3
ಶುಂಠಿ 1 ಇಂಚು
ರುಚಿಗೆ ತಕ್ಕಷ್ಟು ಉಪ್ಪು

ಒಂದು ಚಮಚ ಎಣ್ಣೆ ಬಿಸಿ ಮಾಡಿ ಹಸಿಮೆಣಸು ಹುರಿದು ಮಿಕ್ಸಿಗೆ ಹಾಕಿ, ಇದರೊಟ್ಟಿಗೆ  ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ - ಎಣ್ಣೆ, ಸಾಸಿವೆ, ಕರಿಬೇವು, 1/4 ಚಮಚ ಉದ್ದು ಹುರಿದು ಚಟ್ನಿಗೆ ಹಾಕಿ ಕಲೆಸಿ, ನಂತರ 1/4 ಚಮಚ ನಿಂಬೆರಸ ಹಿಂಡಿ ಕಲೆಸಿ,

ಬೆಂಗಳೂರು ಅಕ್ಕಿ ರೊಟ್ಟಿ

ಅಕ್ಕಿ ಹುಡಿ 1 ಕಪ್
ಈರುಳ್ಳಿ 1/2 ಕಪ್ (ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸು 3 (ಸಣ್ಣಗೆ ಹೆಚ್ಚಿದ್ದು)
ಕರಿಬೇವು ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಜೀರಿಗೆ 1/4 ಚಮಚ
ತೆಂಗಿನತುರಿ 1/4 ಕಪ್
ಅನ್ನದ ಪೇಸ್ಟ್ 4 ಚಮಚ ಅಥವಾ 4 ಚಮಚ ಮೈದ
ರುಚಿಗೆ ತಕ್ಕಷ್ಟು ಉಪ್ಪು

ಒಂದು ಪಾತ್ರೆಯಲ್ಲಿ ಎಲ್ಲವನ್ನು ಹಾಕಿ ಸ್ವಲ್ಪ ಸ್ವಲ್ಪ ಬೆಚ್ಚಗಿನ ನೀರು ಹಾಕಿ ಕಲಸಿ, ತಟ್ಟಲು ಸುಲಭವಾಗುವ ಹಾಗೆ ಮಾಡಿಕೊಳ್ಳಿ. ತವಕ್ಕೆ ಎಣ್ಣೆ ಸವರಿ ತೆಳ್ಳಗೆ ತಟ್ಟಿ ಬೆಂಕಿಯ ಮೇಲಿಡಿ. ಮತ್ತೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅಕ್ಕಿ ರೊಟ್ಟಿ ರೆಡಿ. ಇದು ಹಾಗೆಯೇ ತಿನ್ನಬಹುದು ಅಥವಾ ನಿಂಬೆಹಣ್ಣಿನ ಉಪ್ಪಿನಕಾಯಿ ಒಟ್ಟಿಗೆ ಸಹ ತಿನ್ನಲು ರುಚಿ.

ಭಾನುವಾರ, ಜನವರಿ 16, 2011

ಡೇಟ್ಸ್ ಮತ್ತು ನಟ್ಸ್ ರೋಲ್

ಡೇಟ್ಸ್ 1/2 ಕೆಜಿ
ಗೋಡಂಬಿ 15
ಬಾದಾಮಿ 15
ಏಲಕ್ಕಿ 6 (ಪುಡಿ ಮಾಡಿ)
ತುಪ್ಪ 10 ಚಮಚ
ಬ್ರೆಡ್ ಕ್ರಮ್ಸ್ (ಬ್ರೆಡ್ ಸ್ಲೈಸ್ ತವದಲ್ಲಿ ಬಿಸಿಮಾಡಿ ಪುಡಿ ಮಾಡಿಟ್ಟುಕ್ಕೊಳ್ಳಿ)

ಮೊದಲಿಗೆ ಡೇಟ್ಸ್  ಬೀಜ ತೆಗೆದು ಶುದ್ಧ ಮಾಡಿಟ್ಟುಕೊಳ್ಳಿ. Non-stick ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಇದರಲ್ಲಿ ಗೋಡಂಬಿ, ಬಾದಾಮಿ ಬೇರೆ ಬೇರೆಯಾಗಿ, ಕಪ್ಪಾಗದ ಹಾಗೆ ಹುರಿದು ತೆಗೆಯಿರಿ, ಇದೇ ತುಪ್ಪಕ್ಕೆ ಡೇಟ್ಸ್ ಹಾಕಿ ನಿಧಾನವಾಗಿ ಕಲೆಸಿ. ಮರದ ಸೌಟಿನಲ್ಲಿ ಒತ್ತಿ ಒತ್ತಿ ಮೀಡಿಯಂ ಬೆಂಕಿಯಲ್ಲಿ ಕಲಸಿ. ಡೇಟ್ಸ್ ಮುದ್ದೆ ತರಹ ಆಗುತ್ತೆ, ಸ್ಟೌವ್ ಆಫ್ ಮಾಡಿ. ನಂತರ ಇದಕ್ಕೆ ಹುರಿದ ನಟ್ಸ್, ಏಲಕ್ಕಿ ಪುಡಿ ಹಾಕಿ ಒಂದಕ್ಕೊಂದು ಅಂಟಿಕ್ಕೊಳ್ಳುವವರೆಗೂ  ಚೆನ್ನಾಗಿ ಕಲಸಿ. ನಂತರ ಇದನ್ನು ತಟ್ಟೆಗೆ ಹಾಕಿ ರೋಲ್ ಮಾಡಿ, ಈ ರೋಲನ್ನು ಬ್ರೆಡ್ ಕ್ರಮ್ಸ್ ನಲ್ಲಿ ಉರುಳಿಸಿ freezer ನಲ್ಲಿ 1/2 ಘಂಟೆ ಇಟ್ಟು, ತೆಗೆದು 1/2 ಇಂಚು ದಪ್ಪಕ್ಕೆ ರೌಂಡಾಗಿ ಕತ್ತರಿಸಿ.  ಸರಿಯಾಗಿ ಕತ್ತರಿಸಲು ಬಾರದಿದ್ದರೆ ಇನ್ನೂ ಸ್ವಲ್ಪ ಹೊತ್ತು freezer ನಲ್ಲಿಟ್ಟು  ಗಟ್ಟಿಯಾದ ನಂತರ ಕತ್ತರಿಸಿ, ತುಂಡುಗಳನ್ನ ಸವಿಯಿರಿ, ತುಂಬಾ ರುಚಿಕರವಾಗಿರುತ್ತದೆ. ಅಗತ್ಯವಿರುವಸ್ಟು   ತುಂಡು ಮಾಡಿಕೊಂಡು ಉಳಿದದ್ದನ್ನು ಪುನ: ಫ್ರಿಡ್ಜ್ ನಲ್ಲಿಡಿ.
ಇದರಲ್ಲಿ ಸಕ್ಕರೆ ಇಲ್ಲ, ನೀರು ಇಲ್ಲ, ಮಾಡಲು ತುಂಬಾ ಸುಲಭ. ಸವಿಯಲು fantastic!
ಒಮ್ಮೆ ಪ್ರಯತ್ನಿಸಿ.
ವಿ.ಸೂ: ತುಪ್ಪ 2 ಚಮಚ ಹೆಚ್ಚುಕಮ್ಮಿ ಮಾಡಿಕೊಳ್ಳಬಹುದು; ಡೇಟ್ಸ್ ಸ್ವಲ್ಪ soft ಇರುವುದು ತೆಗೆದುಕೊಳ್ಳಿ, ತುಂಬಾ ಕ್ರಯದ್ದು ಬೇಡ.


ಅಲೂ ಮತ್ತು ಬದನೆಕಾಯಿ ಪಲ್ಯ

ಬದನೆ (ಹಸಿರು ಉದ್ದದ್ದು) 2
ಆಲೂ ದೊಡ್ಡದು 2
ಎಣ್ಣೆ 3 ಚಮಚ
ಸಾಸಿವೆ 1/4 ಚಮಚ
ಹಸಿರು ಮೆಣಸಿನಕಾಯಿ 2
ಕರಿಬೇವು
ಅರಸಿನ 1/4 ಚಮಚ
ಮೆಣಸಿನ ಹುಡಿ (ಬ್ಯಾಡಗಿ/ಕಾಶ್ಮೀರಿ) 1/2 ಚಮಚ
ಹುಣಿಸೆ ರಸ 1/2 ಚಮಚ
ತುಪ್ಪ 1/2 ಚಮಚ
ವಾಂಗೀಬಾತ್ ಪುಡಿ 1 ಚಮಚ (ಎಂಟಿಅರ್)
ತೆಂಗಿನತುರಿ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮೊದಲಿಗೆ ಆಲೂ ಮತ್ತು ಬದನೆಕಾಯಿಯನ್ನು ಹೆಚ್ಚಿಕ್ಕೊಳ್ಳಿ (1 ಇಂಚು ಉದ್ದ), ಬದನೆಕಾಯಿಯನ್ನು ಮಾತ್ರ ನೀರಿನಲ್ಲಿ ಹಾಕಿಡಿ, ಬಾಣಲೆಯಲ್ಲಿ  ಎಣ್ಣೆ, ತುಪ್ಪ ಹಾಕಿ, ಬಿಸಿ ಆದ ನಂತರ ಸಾಸಿವೆ, ಹಸಿಮಣಸು, ಕರಿಬೇವು, ನೀರಿನಲ್ಲಿ ಹಾಕಿಟ್ಟಿದ್ದ ಬದನೆಕಾಯಿ ತೆಗೆದು ಹಾಕಿ 1 ನಿಮಿಷ ಕಲೆಸಿ, ನಂತರ ಆಲೂ ಹಾಕಿ ಕಲೆಸಿ, ಅಗತ್ಯವಿದ್ದಷ್ಟು ಉಪ್ಪು, ಅರಸಿನ ಹಾಕಿ ಮುಚ್ಚಿಡಿ, ಮುಕ್ಕಾಲು ಭಾಗ ಬೆಂದ ನಂತರ ಇದಕ್ಕೆ ಮೆಣಸಿನ ಹುಡಿ, ಹುಣಿಸೆ ರಸ, ವಾಂಗೀಬಾತ್ ಪುಡಿ ಹಾಕಿ ನಿಧಾನವಾಗಿ ಕಲೆಸಿ, 2 ನಿಮಿಷ ಆದ ನಂತರ ತೆಂಗಿನತುರಿ ಹಾಕಿ ಕಲೆಸಿ ಇಳಿಸಿ (ಮೀಡಿಯಂ ಫ್ಲೇಮ್ ನಲ್ಲಿ ಮಾಡಬೇಕು) ಇದಕ್ಕೆ ನೀರಿನ ಅಗತ್ಯವಿಲ್ಲ.
ಇದು ಚಪಾತಿಗೆ ಮತ್ತು ಉದುರುದುರಾದ ಅನ್ನಕ್ಕೆ ಕಲಸಿ ತಿನ್ನಲು  ಭಾರೀ ರುಚಿ.


ಟೊಮೆಟೊ ಗೊಜ್ಜು

ಟೊಮೆಟೊ 2
ಈರುಳ್ಳಿ 2
ಮೆಣಸಿನಕಾಯಿ 2(ಸಣ್ಣಗೆ ಹೆಚ್ಚಿದ್ದು)
ಅರಸಿನ 1/4 ಚಮಚ
ಮೆಣಸಿನ ಹುಡಿ 1/2 ಚಮಚ
ಎಣ್ಣೆ 3 ಚಮಚ
ಸಾಸಿವೆ 1/4 ಚಮಚ
ಕರಿಬೇವು (ಬೇಕಾದರೆ)

ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಸಾಸಿವೆ, ಹಸಿಮೆಣಸು, ಈರುಳ್ಳಿ ಸಣ್ಣಗೆ ಹೆಚ್ಚಿದ್ದು ಹಾಕಿ ಫ್ರೈ ಮಾಡಿ, ನಂತರ ಕರಿಬೇವು, ಸಣ್ಣಗೆ ಹೆಚ್ಚಿದ ಟೊಮೆಟೊ ಹಾಕಿ ಕಲೆಸಿ, ಇದಕ್ಕೆ ಉಪ್ಪು, ಅರಸಿನ, ಮೆಣಸಿನ ಹುಡಿ ಹಾಕಿ 3 ನಿಮಿಷ ಮುಚ್ಚಿಡಿ. (ಇದಕ್ಕೆ ನೀರಿನ ಅಗತ್ಯವಿಲ್ಲ). ೫ ನಿಮಿಷ ಸಾಕು ಈ ಗೊಜ್ಜು ತಯಾರಿಸಲು,
ಇದು ಚಪಾತಿ, ಪೂರಿಗೆ ಚನ್ನಾಗಿರುತ್ತದೆ, ಉದುರುದುರಾದ  ಬಿಸಿ ಅನ್ನಕ್ಕೆ ಚೂರು ತುಪ್ಪ ಹಾಕಿ ತಿನ್ನಲು ರುಚಿ, ರುಚಿ. ಕ್ವಿಕ್ ಆಂಡ್ ಸಿಂಪಲ್.

ಶುಕ್ರವಾರ, ಜನವರಿ 14, 2011

ಖಾರ ಪೊಂಗಲ್, ಮೆಂತ್ಯೆ ಗೊಜ್ಜು

ಖಾರ ಪೊಂಗಲ್

ಅಕ್ಕಿ 1 ಕಪ್
ಹೆಸರುಬೇಳೆ 1/2 ಕಪ್
ಗೋಡಂಬಿ 2 ಚಮಚ
ಕಾಳುಮೆಣಸು 1 ಚಮಚ
ಜೀರಿಗೆ 1/2 ಚಮಚ
ಶುಂಠಿ 1 ಚಮಚ (ಸಣ್ಣಗೆ ಹೆಚ್ಚಿ ಜಜ್ಜಿಕೊಳ್ಳಿ)
ಕರಿಬೇವು ಸ್ವಲ್ಪ
ತುಪ್ಪ 3 ಚಮಚ
ನೀರು 3-1/2 ಕಪ್
ಉಪ್ಪು ರುಚಿಗೆ ತಕ್ಕಂತೆ

ಮೊದಲಿಗೆ ಹೆಸರುಬೇಳೆಯನ್ನು ಸ್ವಲ್ಪ ಹುರಿದುಕೊಳ್ಳಿ, ಇದು ತಣಿದ ನಂತರ ಅಕ್ಕಿ, ಬೇಳೆಯನ್ನು ತೊಳೆದು  ಇಟ್ಟು ಕೊಳ್ಳಿ. ಒಂದು ಕುಕ್ಕರ್ ತೆಗೆದುಕೊಂಡು ತುಪ್ಪ ಹಾಕಿ ಗೋಡಂಬಿ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಇದೇ ತುಪ್ಪಕ್ಕೆ ಕಾಳುಮೆಣಸು, ಜೀರಿಗೆ, ಶುಂಠಿ ಜಜ್ಜಿದ್ದು, ಕರಿಬೇವು ಒಂದೊಂದಾಗಿ ಹಾಕಿ ಹುರಿಯಿರಿ. ಮತ್ತೆ ಅಕ್ಕಿ, ಬೇಳೆಯನ್ನು ಕುಕ್ಕರಿಗೆ ಹಾಕಿ, 3 ½ ಕಪ್ ನೀರು, ಉಪ್ಪು ಹಾಕಿ ಕಲಸಿ ಮುಚ್ಚಳ ಮುಚ್ಚಿ, 2 ವಿಸಲ್ ಬರುವ ತನಕ ಬೇಯಿಸಿ. ಪ್ರೆಶರ್ ಇಳಿದ ನಂತರ ಗೋಡಂಬಿ ಹಾಕಿ ನಿಧಾನವಾಗಿ ಕಲಸಿ. ಬಿಸಿ ಬಿಸಿಯಾಗಿ ತೆಂಗಿನಕಾಯಿ ಚಟ್ನಿಯ ಜೊತೆ ತಿನ್ನಲು ರುಚಿ.

ಮೆಂತ್ಯೆ ಗೊಜ್ಜು

ಹುರಿಗಡಲೆ ಪುಡಿ 2 ಚಮಚ
ಮೆಂತ್ಯೆ 1 ಚಮಚ
ತುಪ್ಪ 1-1/2 ಚಮಚ
ಸಾಸಿವೆ 1/4 ಚಮಚ
ಹಸಿಮೆಣಸು 2
ಸಾರಿನ ಪುಡಿ 1 ಚಮಚ
ಬೆಲ್ಲ 1/೪ ಚಮಚ
ಕರಿಬೇವು
ಹುಣಿಸೆ ರಸ 4 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಮತ್ತೆ  ಸಾಸಿವೆ ಹಾಕಿ ಸಿಡಿದ ನಂತರ ಮೆಂತ್ಯೆ ಹಾಕಿ, ಹಸಿಮೆಣಸು ಉದ್ದಕ್ಕೆ ಹೆಚ್ಚಿ ಹಾಕಿ, ಕರಿಬೇವು, ಹುಣಸೆ ರಸ ಹಾಕಿ ಕಲಸಿ, ಮತ್ತೆ ಬೆಲ್ಲ ಪುಡಿ, ಉಪ್ಪು, MTR ಸಾರಿನ ಪುಡಿ ಹಾಕಿ ಕಲಸಿ. ಈಗ ಅರ್ಧ ಕಪ್ ನೀರು ಮತ್ತು ಹುರಿಗಡಲೆ ಪುಡಿ ಹಾಕಿ 2 ನಿಮಿಷ ಕುದಿಸಿ. ಮೆಂತ್ಯೆ ಗೊಜ್ಜು ಸ್ವಲ್ಪ ಗಟ್ಟಿಯಾಗಿ ಇರಬೇಕು (ತುಂಬಾ ಗಟ್ಟಿ ಅನಿಸಿದರೆ ಸ್ವಲ್ಪ ನೀರು ಹಾಕಿ). ಬಿಸಿ ಅನ್ನದೊಂದಿಗೆ ತಿನ್ನಲು ಭಾರೀ ರುಚಿ. ಅನ್ನಕ್ಕೆ ಒಂದು ಚಮಚ ತುಪ್ಪ ಹಾಕಿದರೆ...ವಾಹ್!

ಬುಧವಾರ, ಜನವರಿ 12, 2011

ಸಂಕ್ರಾಂತಿ ಸ್ಪೆಶಲ್

ಜನವರಿ ೧೪ ರಂದು ಮಕರ ಸಂಕ್ರಾಂತಿ. ದೇಶದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸುವ ವಿಶೇಷ ಹಬ್ಬ. ಕರ್ನಾಟಕದಲ್ಲಿ ಎಲ್ಲಾ ಕಡೆ ಅತ್ಯಂತ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಸ್ನೇಹಿತರಿಗೆ, ನೆರೆಯವರಿಗೆ ಎಳ್ಳು ಬೆಲ್ಲ ಬೀರಿ ಹಬ್ಬದ ಶುಭಾಶಯ ತಿಳಿಸುವುದು ವಾಡಿಕೆ.ಎಳ್ಳು ಬೆಲ್ಲ ತಿಂದು ನೀವೆಲ್ಲರೂ ಒಳ್ಳೇದನ್ನೇ ಮಾತನಾಡಿ.

ಈ ಹಬ್ಬಕ್ಕೋಸ್ಕರ ಎರಡು ತಿಂಡಿಗಳನ್ನು ಮಾಡುವ ವಿಧಾನ ಇಲ್ಲಿದೆ....

ಪೊಂಗಲ್

ಬೇಕಾದ ಸಾಮಗ್ರಿಗಳು

ಅಕ್ಕಿ 1 ಕಪ್
ಬೆಲ್ಲದ ಹುಡಿ  1-1/4 ಕಪ್
ಹೆಸರು ಬೇಳೆ 1/2 ಕಪ್
ತುಪ್ಪ 1/4 ಕಪ್
ಒಣ ದ್ರಾಕ್ಷಿ -2 ಚಮಚ
ಗೋಡಂಬಿ - 3 ಚಮಚ
ಏಲಕ್ಕಿ ಪುಡಿ -ಸ್ವಲ್ಪ
ಕೊಬ್ಬರಿ ಸಣ್ಣಕ್ಕೆ ಕಟ್ ಮಾಡಿದ ತುಂಡುಗಳು ೪ ಚಮಚ

ಮಾಡುವ ವಿಧಾನ: ಮೊದಲಿಗೆ ಅಕ್ಕಿ, ಬೇಳೆಯನ್ನು 2 ನಿಮಿಷ  ಬಾಣಲೆಯಲ್ಲಿ ಹುರಿಯಿರಿ (ಎಣ್ಣೆ ಹಾಕದೆ). ಇದು ತಣಿದ ನಂತರ ಎರಡು ಸಲ ತೊಳೆಯಿರಿ,
ಮತ್ತೆ ಕುಕ್ಕರಿನಲ್ಲಿ  ಎರಡನ್ನೂ ಜೊತೆಗೆ ಹಾಕಿ  4 1/2 ಕಪ್ ನೀರು ಹಾಕಿ 3 ವಿಸಲ್ ಬಂದ ನಂತರ ಸ್ಟೌವ್ ಆಫ್ ಮಾಡಿ. ಈಗ ದ್ರಾಕ್ಷಿ, ಗೋಡಂಬಿ, ಕೊಬ್ಬರಿ ಸ್ವಲ್ಪ ತುಪ್ಪದಲ್ಲಿ ಕರಿದು ಇಟ್ಟುಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಪುಡಿ ಮಾಡಿದ ಬೆಲ್ಲ ಹಾಕಿ, ಅದಕ್ಕೆ 1 ಕಪ್ ನೀರು ಹಾಕಿ ಬಿಸಿಮಾಡಿ ಕರಗಿಸಿ, ನಂತರ ಸೋಸಿ. ಈಗ ಕರಗಿಸಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಕುದಿಸಿ. ಒಂದು ಎಳೆ ಪಾಕ ಬಂದ ನಂತರ (ನೂಲು ತರಹ ಎಳೆ ಬರಬೇಕು), ಬೇಯಿಸಿಟ್ಟ ಅಕ್ಕಿ, ಬೇಳೆಯನ್ನು ಪಾಕಕ್ಕೆ ಹಾಕಿ ಕಲಸಿ, ಇನ್ನು, ತುಪ್ಪ, ಕರಿದಿಟ್ಟುಕೊಂಡ ಕೊಬ್ಬರಿ, ಗೋಡಂಬಿ, ದ್ರಾಕ್ಷಿ ಹಾಕಿ ಪುನ: ಚೆನ್ನಾಗಿ ಕಲಸಿ, ಇದರೊಟ್ಟಿಗೆ ಏಲಕ್ಕಿ ಪುಡಿ ಸಹ ಹಾಕಿ. ಸಿಹಿ ಸಿಹಿಯಾದ ಸ್ವಾದಿಷ್ಟ ಪೊಂಗಲ್ ರೆಡಿ. ಬಿಸಿಬಿಸಿ ತಿಂದರೆ ರುಚಿ ಜಾಸ್ತಿ.


ಬೆಂಗಳೂರು ಆಂಬೊಡೆ

ಕಡಲೆಬೇಳೆ 1 ಕಪ್
ಈರುಳ್ಳಿ 2
ಹಸಿಮೆಣಸು 3 ಅಥವಾ 4
ಕರಿಬೇವು 3 ಚಮಚ (ಸಣ್ಣಗೆ ಹೆಚ್ಚಿದ್ದು)
ಪುದಿನ 3 ಚಮಚ (ಸಣ್ಣಗೆ ಹೆಚ್ಚಿದ್ದು)
ಶುಂಠಿ 1 ಇಂಚು
(ಬೇಕಾದರೆ 2 ಬೆಳ್ಳುಳ್ಳಿ ಎಸಳು)
 ಕಟ್ ಮಾಡಿದ ಹಸಿಕೊಬ್ಬರಿ 2 ಚಮಚ
ಇಂಗು
ಉಪ್ಪು

ಮಾಡುವ ವಿಧಾನ: ಕಡಲೆಬೇಳೆ 2 ಗಂಟೆ ನೆನೆಸಿಡಿ. ಮೊದಲಿಗೆ ಶುಂಠಿ, ಹಸಿಮೆಣಸು (ಬೇಕಾದರೆ 2 ಬೆಳ್ಳುಳ್ಳಿ ಎಸಳು) ಜೊತೆಗೆ ರುಬ್ಬಿಕೊಳ್ಳಿ (ತುಂಬಾ ಪೇಸ್ಟ್ ಆಗುವುದು ಬೇಡ)
ಅದನ್ನು ತೆಗೆದು ಬೌಲ್ ಗೆ ಹಾಕಿಕೊಳ್ಳಿ. ನಂತರ ಕಡಲೆಬೇಳೆಯನ್ನು ನೀರಿನಿಂದ ತೆಗೆದು ತರಿತರಿಯಾಗಿ ರುಬ್ಬಿ ತೆಗೆದಿಟ್ಟುಕ್ಕೊಳ್ಳಿ. ಈ ತರಿಯೊಟ್ಟಿಗೆ ಶುಂಠಿಯ ಪೇಸ್ಟ್ ಹಾಕಿ,
ಇದರೊಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ತೆಂಗಿನಕಾಯಿ, ಕರಿಬೇವು, ಪುದಿನ, ಉಪ್ಪು, ಇಂಗು ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ (ನೀರು ಹಾಕಬೇಡಿ). ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ (ಮೀಡಿಯಂ flame). ಈಗ ಕಲಸಿ ಇಟ್ಟು ಕೊಂಡ ಆಂಬೊಡೆ ಮಿಕ್ಸ್ ನ್ನು ಸಣ್ಣ ನಿಂಬೆ ಹಣ್ಣಿನ ಗಾತ್ರದಲ್ಲಿ ತೆಗೆದುಕೊಂಡು ಅಂಗೈಯಲ್ಲಿ ತಟ್ಟಿ ಕಾದ ಎಣ್ಣೆಗೆ ಹಾಕಿ ಕರಿಯಿರಿ (ಕಂದು ಬಣ್ಣಕ್ಕೆ ತಿರುಗುವ ತನಕ). ಎಣ್ಣೆಯಿಂದ ತೆಗೆದು ಸ್ವಲ್ಪ ತಣಿದ ನಂತರ ಗರಿಗರಿಯಾದ ಆಂಬೊಡೆ ನೀವೂ ತಿನ್ನಿ, ಪ್ರಿಯರಿಗೂ ತಿನ್ನಿಸಿ. ಚಳಿಗಾಲದಲ್ಲಿ ಕಾಫಿ ಯಾ ..... ಜೊತೆ ತಿನ್ನಲು ಬಹಳ ಖುಶಿ.
(ಕಡಲೆಬೇಳೆ ವಾಯುವಾದ ಕಾರಣ  ಬೆಳ್ಳುಳ್ಳಿ ಹಾಕಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಪುದಿನ ಸೊಪ್ಪಿನ ಬದಲು ಸಬ್ಬಕ್ಕಿ ಸೊಪ್ಪು ಕೂಡಾ ಹಾಕಬಹುದು)

ಸೋಮವಾರ, ಜನವರಿ 03, 2011

ಸಮಸ್ತ ಕನಡಿಗರಿಗೆ ನಮಸ್ಕಾರ
ನಾಡಿನಿಂದ ಬಲು ದೂರ ಇರುವ ವಿಶ್ವ ಕನ್ನಡಿಗನ ಹೃದಯವನ್ನು ಮುಟ್ಟುವ ಒಂದು ಪ್ರಯತ್ನ ಇದು.
ಹೃದಯಕ್ಕೆ ಉದರವೇ ನೇರ ದಾರಿಯಲ್ಲವೆ? ಅಂತೆಯೇ ನಾನು ಆಗಾಗ  ನಾಡಿನ ತಿಂಡಿ, ತಿನಸುಗಳನ್ನು ಮಾಡುವ ವಿಧಾನಗಳನ್ನು ನಿಮಗೆ ತಿಳಿಯ ಪಡಿಸಲಿದ್ದೇನೆ.
ನಿಮಗೆ ಇಷ್ಟವಾದರೆ, ದಯವಿಟ್ಟು ಮಾಡಿ ನಿಮ್ಮವರಿಗೆ, ಸ್ನೇಹಿತರಿಗೆ ತಿನ್ನಿಸಿ ಧನ್ಯವಾಗಿರಿ.
ಜನ ತಿಂದು ಹೊಗಳಿದರೆ ಸಿಗುವ ಸಂತೋಷ ತಿಂದದ್ದಕ್ಕಿಂತಲೂ ಜಾಸ್ತಿ ಅಲ್ಲವೇ?
ಹಾಗೇ, ಕೆಲವು ಟಿಪ್ಸ್ ಕೂಡಾ ಇಲ್ಲಿ ಸಿಗುತ್ತವೆ.
ನಿಮ್ಮ ಅನಿಸಿಕೆಗಳನ್ನು ಬರೆಯಿರಿ ...
ಸದ್ಯದಲ್ಲೇ ತಿಂಡಿಗಳೊಂದಿಗೆ ಬರಲಿದ್ದೇನೆ... ಜಮುನ